ಅಧಿಭಾರ
	
ಒಬ್ಬ ವ್ಯಕ್ತಿಯ ಮೇಲೂ ಹಿರಿಯ ಅವಿಭಕ್ತ ಕುಟುಂಬದ ಮೇಲೂ ಅವರ ಆದಾಯ ಒಂದು ಮಿತಿಗೆ ಮೀರಿದ್ದರೆ ಆದಾಯತೆರಿಗೆ ಮತ್ತು ಅಧಿಕರಗಳ (ಸೂಪರ್ ಟ್ಯಾಕ್ಸ್) ಜೊತೆಗೆ ಹಾಕುವ ತೆರಿಗೆ (ಸರ್‍ಚಾರ್ಜ್).
	
ಅಧಿಭಾರವನ್ನು ಆದಾಯ ತೆರಿಗೆ ಮತ್ತು ಅಧಿಕರ ಇವುಗಳೆರಡರ ಮೇಲೂ ನಿಗದಿಯಾಗಿರುವ ದರದಲ್ಲಿ ಹಾಕುತ್ತಾರೆ; ಈ ದರವನ್ನು ಕಾಲಕಾಲಕ್ಕೆ ಬದಲಾಯಿಸಬಹುದು.
	
ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವಲ್ಲಿ ಆದಾಯ ತೆರಿಗೆ ಮತ್ತು ಅಧಿಕರಗಳ ಮೇಲೆ ಶೇಕಡ ಐದರಂತೆ ಹೆಚ್ಚುವರಿ ಅಧಿಭಾರವನ್ನು ಹಾಕಲಾಗುತ್ತದೆ. ಕೆಲಸ ಮಾಡದೆ ಸಂಪಾದಿಸಿದ ಆದಾಯದ ಮೇಲೆ ಆದಾಯ ತೆರಿಗೆ ಮತ್ತು ಅಧಿಕರಗಳ ಸೇಕಡ ಹದಿನೈದರಷ್ಟು ವಿಶಿಷ್ಟ ಅಧಿಭಾರವನ್ನು ಹಾಕುವುದುಂಟು (1969). ಅಧಿಭಾರದ ಬಗ್ಗೆ ಸೀಮಾಂತ ಪರಿಹಾರವನ್ನು (ಮಾರ್ಜಿನಲ್ ರಿಲೀಫ್) ಕೊಡಲು ಅವಕಾಶಗಳನ್ನು ಕಲ್ಪಿಸಬಹುದು.
	
ಇಂದಿನ ಆರ್ಥಿಕಲೋಕದಲ್ಲಿ ಎಲ್ಲ ವಲಯಗಳಲ್ಲೂ ಅಧಿಭಾರ ಉಂಟು. ಉದಾಹರಣೆಗೆ ವಿದ್ಯುತ್‍ಕರ, ಪೌರತೆರಿಗೆ, ಮನೆಗಂದಾಯ ಮುಂತಾದವುಗಳ ಮೇಲೂ ಅಧಿಭಾರವನ್ನು ವಸೂಲುಮಾಡುವ ಪದ್ಧತಿ ಇದೆ.		
	
(ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ